ಕಲ್ಲುಗಣಿ : ಉಪಲೋಗಾರ್ಹ ಕಲ್ಲುಗಳನ್ನು ಹೊರತೆಗೆಯಬಹುದಾದ ಕಲ್ಲಿನ ನಿಕ್ಷೇಪ (ಕ್ವಾರಿ). ಒಂದು ಗಣಿಯಲ್ಲಿ ದೊರೆಯುವ ಕಲ್ಲಿನ ದರ್ಜೆಯನ್ನು ಅನುಸರಿಸಿ ಆ ಕಲ್ಲು ಎಂಥ ಕೆಲಸಕ್ಕೆ ಉಪಯೋಗವಾಗುತ್ತದೆ ಎಂಬ ಅಂಶ ಇತ್ಯಾರ್ಥವಾಗುತ್ತದೆ. ವಿವಿಧ ನಮೂನೆಯ ಕಲ್ಲಿನ ಗಣಿಗಳು ಸಾಕಷ್ಟು ಸಂಖ್ಯೆಯಲ್ಲಿ ಇರಬಹುದಾದರೂ ಒಂದು ಗಣಿಯ ಉಪಯುಕ್ತತೆಯನ್ನು ನಿರ್ಧರಿಸುವ ಪ್ರಧಾನಾಂಶ ಅದರ ವಾಣಿಜ್ಯ ಮೌಲ್ಯ. ಎಂದರೆ, ಆ ಗಣಿಯಿಂದ ದೊರೆಯುವ ಕಲ್ಲುಗಳ ಉಪಯೋಗ ಮನುಷ್ಯನಿಗಿರಬೇಕು. ಅವು ಅಧಿಕ ಪರಿಮಾಣದಲ್ಲಿ ಪಭ್ಯವಿರಬೇಕು ಮತ್ತು ಗಣಿಯಿಂದ ಹೊರಸಾಗಣೆಯ ಸೌಲಭ್ಯ ಚೆನ್ನಾಗಿರಬೇಕು.

ಕ್ವಾರಿ ಪದದಿಂದ ಕ್ವಾರಿಯಿಂಗ್ ಎಂಬುದು ವ್ಯುತ್ಪತ್ತಿಯಾಗಿದೆ. ಕಲ್ಲಿನ ನೈಸರ್ಗಿಕ ತಾಣಗಳಿಂದ ವಾಣಿಜ್ಯೋಪಯೋಗಕ್ಕೋಸ್ಕರ ಕಲ್ಲನ್ನು ಹೊರತೆಗೆಯುವುದು ಎಂದು ಇದರ ಅರ್ಥ. ಇಂದು ಕ್ವಾರಿಯಿಂಗ್ ಒಂದು ದೊಡ್ಡ ಕೈಗಾರಿಕೆಯಾಗಿ (ಇಂಡಸ್ಟ್ರಿ) ಬೆಳೆದಿದೆ. ಇದರಲ್ಲಿ ಎರಡು ಪ್ರಮುಖ ಶಾಖೆಗಳಿವೆ : ಅಳತೆ ಕಲ್ಲುಗಳ ತಯಾರಿಕೆ, ತುಂಡು ಮತ್ತು ಪುಡಿ ಕಲ್ಲುಗಳ ತಯಾರಿಕೆ.

ಅಳತೆ ಕಲ್ಲು
ಕಟ್ಟಡದ ನಿರ್ಮಾಣದಲ್ಲಿ ಕೆತ್ತನೆಯ ಕೆಲಸಗಳಲ್ಲಿ, ಸುಂದರ ವಿಗ್ರಹಗಳ ಕಂಡರಣೆಯಲ್ಲಿ, ಸ್ಲೇಟ್ (ಬರೆಯುವ, ನೆಲಕ್ಕೆ ಚಪ್ಪಡಿ ಹಾಸುವ ಇತ್ಯಾದಿ) ಕಲ್ಲಿನ ಹಾಳೆಗಳ ಕೊಯ್ತೆಗೆತದಲ್ಲಿ ಅಳತೆಕಲ್ಲಿಗೆ ಪ್ರಾಶಸ್ತ್ಯವಿದೆ. ಕಲ್ಲಿನ ಗಣಿಗಳು ಯಥೇಚ್ಛವಾಗಿ ಇರಬಹುದಾದರೂ ಅಳತೆ ಕಲ್ಲುಗಳು ಕೇವಲ ಕೆಲವೇ ಗಣಿಗಳಿಂದ ದೊರೆಯುತ್ತವೆ. ಒಂದು ಗಣಿಯಲ್ಲಿನ ಕಲ್ಲು ಅಳತೆಗಲ್ಲುಗಳಾಗಿ ದೊರೆಯಬಲ್ಲುದೇ ಇಲ್ಲವೇ ಎಂಬ ಅಂಶ ಪ್ರಧಾನವಾಗಿ ಆ ಕಲ್ಲಿನ ರಚನೆಯನ್ನು ಅನುಸರಿಸಿ ನಿರ್ಧರಿತವಾಗುವುದು. ಆದ್ದರಿಂದ ಅಳತೆಗಲ್ಲುಗಳ ಕೈಗಾರಿಕೆಯಲ್ಲಿ ಒಂದು ಯೋಗ್ಯ ನಿಕ್ಷೇಪವನ್ನು ಆರಿಸುವುದು ಮೊದಲ ಹೊಣೆ. ತರುವಾಯ ಅಂಥ ಗಣಿಯಲ್ಲಿನ ಕಲ್ಲಿನ ರಚನೆಯನ್ನು (ಎಂದರೆ ಅದು ಯಾವ ವರ್ಗಕ್ಕೆ ಸೇರಿದೆ, ಅದರ ಮೇಲೆ ಧಾರೆಗಳು ಹೇಗೆ ಹಬ್ಬಿವೆ ಮುಂತಾದ ಅಂಶಗಳು) ಅನುಸರಿಸಿ ಅಳತೆಗಲ್ಲುಗಳನ್ನು ಕೊಯ್ತೆಗೆ ಯುವ ವಿಧಾನಗಳನ್ನು ರೂಪಿಸಿಕೊಳ್ಳಬೇಕು. ಸಿಡಿಮದ್ದು ಸ್ಫೋಟನೆ, ಹಾರೆಪಿಕ್ಕಾಸುಗಳಿಂದ ಅಗೆತ ಈ ಕೈಗಾರಿಕೆಯಲ್ಲಿ ಮಾರಕವೇ ಆಗಬಹುದು. ಮುಂದುವರಿದ ಯಂತ್ರವಿಧಾನದ ಕೊರೆತಗಳು ಇಂದು ಬಳಕೆಯಲ್ಲಿವೆ. ಯಂತ್ರಚಾಲಿತ ಗರಗಸಗಳು ಸೂಕ್ಷ್ಮವಾಗಿ ಕಲ್ಲಿನ ಚಪ್ಪಡಿಗಳನ್ನು ಕೊಯ್ಯತ್ತವೆ; ಅವನ್ನು ಸಾಗುಪಟ್ಟಿಗಳ ಮೂಲಕ ಮುಂದಕ್ಕೆ ಸಾಗಿಸುತ್ತಾರೆ. ಇಂಥ ಸೂಕ್ಷ್ಮಕ್ರಿಯೆ ಆವಶ್ಯಕವಿಲ್ಲದ ನಿಕ್ಷೇಪಗಳಲ್ಲಿ (ಉದಾಹರಣೆಗೆ ಕಟ್ಟಡ ಕಟ್ಟಲು ಬೇಕಾಗುವ ಅಳತೆಗಲ್ಲುಗಳು, ನೆಲದ ಮೇಲೆ ಹಾಸಲು ಬಳಸುವ ಚಪ್ಪಡಿಗಳು, ಮೆಟ್ಟುಲುಕಲ್ಲುಗಳು, ಇತ್ಯಾದಿ) ಯುಕ್ತಪ್ರಮಾಣದ ಸಿಡಿಮದ್ದು, ಬಾಣ, ಕೊಡತಿ ಮುಂತಾದುವು ಸಾಕು.

ತುಂಡು ಮತ್ತು ಪುಡಿಗಲ್ಲುಗಳು 
ಹೆಸರೇ ಸೂಚಿಸುವಂತೆ ಇವುಗಳಲ್ಲಿ ಅಳತೆ ಮುಖ್ಯವಲ್ಲ; ಯಾವ ವಿಧವಾದ ನವುರು ನಾಜೂಕು ಇಲ್ಲಿ ಅಗತ್ಯವಿಲ್ಲ. ಆದರೆ ಉದ್ದೇಶದ ಪೂರೈಕೆಗೋಸ್ಕರ ಒಂದು ನಿಯಮಿತ ಗಾತ್ರ ಬೇಕಾಗುವುದು. ಆದ್ದರಿಂದ ಈ ಕಲ್ಲುಗಳನ್ನು ಕೊಡುವ ಗಣಿಗಳಲ್ಲಿ ಸಿಡಿಮದ್ದು, ಹಾರೆ, ಪಿಕ್ಕಾಸು, ಗುದ್ದಲಿಗಳ ಉಪಯುಕ್ತತೆ ಹೆಚ್ಚು. ಬಂಡೆಗಳ ಮೇಲೆ ಆಳವಾಗಿ ಗುಣಿಗಳನ್ನು ತೋಡಿ ಸಾಕಷ್ಟು ಸಿಡಿಮದ್ದನ್ನು ಅಳವಡಿಸಿ ಭಾರೀ ಸ್ಫೋಟನೆಯಿಂದ ಕಲ್ಲಿನ ಚಿಪ್ಪುಗಳನ್ನು ಬಂಡೆಯಿಂದ ಎಳಕಿಸಲಾಗುವುದು. ಮುಂದೆ ಈ ತುಂಡುಗಳನ್ನು ಹೊಡೆದೋ ಬಡಿದೋ ಅವಶ್ಯವಾದಲ್ಲಿ ಪುನಃ ಸಿಡಿಮದ್ದನ್ನೇ ಉಪಯೋಗಿಸಿಯೋ ಒಡೆಯುತ್ತಾರೆ. ಪುಡಿಗಲ್ಲುಗಳು, ಕಲ್ಲಿನ ಕಣಗಳು ಬೇಕಾಗುವಲ್ಲಿ ಯಂತ್ರಗಳಿಗೆ ತುಂಡುಗಲ್ಲುಗಳನ್ನು ಪೂರೈಕೆ ಮಾಡಿ ಅಲ್ಲಿ ಅವನ್ನು ಪುಡಿಮಾಡಿ ಯೋಗ್ಯಗಾತ್ರದ ಒಂದರಿಯಲ್ಲಿ ಜಲ್ಲಡಿಸಲಾಗುವುದು. ಈಗ ಬೇಕಾದ ಗಾತ್ರದ ತುಂಡುಗಳೋ ಕಣಗಳೋ ಸಿದ್ಧವಾದಂತಾಯಿತು.	(ಎಚ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ